ತೇಪೆ..!

Posted on

ನನ್ನ ಕಥೆ,ನಿನ್ನ ಕವಿತೆ
ಸುತ್ತುತ್ತಿರುತ್ತವೆ
ಅದೇ ಮಾವಿನಮರ;
ಅಕಾಲದ ಮೋಡಕ್ಕೆ
ಹೆದರಿ ಉದುರಿದ ಹೂ
ಉಪ್ಪಿನಕಾಯಿಗೂ ದಕ್ಕದೆ
ಹತಾಶೆಯಲ್ಲಿ ನರಳಿ
ಮೌನ ಬಿಕ್ಕಳಿಸಿದ ಸದ್ದಿಗೆ
ಸಾಕ್ಷಿಯಾಗಿ ,
ಯಾವುದೋ ಭಾವ ಮುಖದ ಮೇಲೆ
ಗೆರೆ ಎಳೆದು ಹೋದದ್ದು
ಎಂದಿಗೂ ಕಲೆಯಾಗಿಯೇ ಉಳಿಯುತ್ತದೆ..
ಉಜ್ಜುತ್ತಾ, ತೇಪೆಹಚ್ಚುತ್ತಾ
ಬದುಕು ಮಾತ್ರ ಮುಗಿಯುತ್ತದೆ..!

-ವಿಜಯ ಕುಮಾರ್ ಕುಂಭಾಶಿ

Advertisements

ಹೋಳಿ

Posted on

ಹೋಳಿ ಹಬ್ಬ;
ಬಣ್ಣಗಳ
ವೈಯಾರಕ್ಕೆ
ಮೂಗು ಮುರಿಯುತಿತ್ತು
ಕಾಗೆ..!

-ವಿಜಯ ಕುಮಾರ್ ಕುಂಭಾಶಿ

ಹನಿಗಳು

Posted on Updated on

೧..
ಹನಿಬೆಳಕು
ಗರಿಬಿಚ್ಚಿದ ಹೊತ್ತು
ಮರಿಕಾಗೆಯೊಂದು
ಧೇನಿಸುತ್ತಿದೆ.

೨..
ಗೂಡೊಳಗಿಂದ
ಬಾಯ್ತುತ್ತಿನ ತುಣುಕು
ಜಾರಿಬಿದ್ದಿದೆ;
ಇರುವೆಸಾಲು ಸ್ತಬ್ಧ!

೩..
ಕಳ್ಳನಡಿಗೆಯ ಬೆಕ್ಕು
ಕ್ಷಣ ಹಿಂತಿರುಗಿದೆ;
ಹೆಜ್ಜೆ ಹಿಂಬಾಲಿಸುತ್ತಿದೆ!

೪..
ಆಟವಾಡಿಸ ಬಂದೀಗ
ತಾಯಿಮೀನು ಬಲೆಗೆ;
ಮರಿ ಕಂಗಾಲು.

-ವಿಜಯ ಕುಮಾರ್ ಕುಂಭಾಶಿ

ಕಾಲು ಮುರಿದ ಕನಸು

Posted on

ಗುಡಿಸಲಿನೊಳಗೆ
ಬಣ್ಣದ ಕನಸಿನ ತಾಯಿಯಿದ್ದಾಳೆ
ಅರಮನೆ ಕಟ್ಟಿ;
ಸಿಂಹಾಸನದಲ್ಲಿ ಕೂತ ಮಗನಿಗೆ
ಸೆರಗಲ್ಲೆ ಗಾಳಿಬೀಸುತ್ತಿದ್ದಾಳೆ ..
ಬೆರಕೆಯಾಗಲು ನಿರಾಕರಿಸಿದೆ
ಅದೇ ಧಿಮಾಕಿನ ಬದುಕು
ಸುತ್ತಿಗೆ ಕಲ್ಲನ್ನು ಚುಂಬಿಸುವ ಭರದಲ್ಲಿ
ತನ್ನ ಕೈಬೆರಳು ಸಿಲುಕಿ
ಅಮ್ಮಾ ಎಂದಿದ್ದಾನೆ,
ಸುತ್ತಲಿನ ಜಗತ್ತು ಅರೆಕ್ಷಣ ನಂದಿಹೋಗಿ
ಕಣ್ಣುಕತ್ತಲೆಯಲ್ಲಿ ಹುಡುಗ
ತಡಕುತ್ತಿದ್ದಾನೆ;ಕಾಲುಮುರಿದ ಕನಸು!
– ವಿಜಯ ಕುಮಾರ್ ಕುಂಭಾಶಿ

ಕ್ಷಮಯಾ ಧರಿತ್ರಿ

Posted on

೧…
ಅಡುಗೆ ಮನೆಯೊಳಿದ್ದೇ
ಉಸಿರು ನಿಲ್ಲಿಸಿ ಆಲಿಸಿದ್ದಾಳೆ;
ತೊಟ್ಟಿಲಿನ ಉಸಿರನ್ನು.

೨…
ಮಕ್ಕಳ ಸಿಂಬಳ ಒರೆಸಿ
ಸುಕ್ಕುಗಟ್ಟಿದ ಸೀರೆ
ಹಳತಾಗುವುದೇ ಇಲ್ಲ..
ಬೆಳಕು ಒಳಬರುವ ಕಿಟಕಿಯಲ್ಲಿ
ಹೊರಗಿಣುಕುವವರ ನೂಕುನುಗ್ಗಲು.

೩…
ಮಾಡಿದಡುಗೆಯ
ರುಚಿನೋಡುತ್ತಾಳೆ
ಮನೆತುಂಬಿದ ಘಮದಲ್ಲಿ;
ನೀವು ಚಪ್ಪರಿಸಿ
ಖಾಲಿಮಾಡಿಟ್ಟ ತಟ್ಟೆಗಳಲ್ಲಿ.

೪…
ಅವಳು ಬಡಿಸುವ ಪಾತ್ರೆ
ಅಕ್ಷಯವೆಂಬುದಷ್ಟೇ ಗೊತ್ತು
ಊಟದ ತಟ್ಟೆಯ ಬಡತನ
ನಿಮಗೆ ತಿಳಿಯುವುದಿಲ್ಲ.

೫…
ಕಿವಿಗಳೆಷ್ಟೇ ಇರಲಿ
ತುಂಬಿದ ಮನೆಯಲ್ಲೂ
ಅವಳು ಬಿಕ್ಕುವುದು
ಗೋಡೆಗಷ್ಟೇ ತಿಳಿಯುತ್ತದೆ.

-ವಿಜಯ ಕುಮಾರ್ ಕುಂಭಾಶಿ

ಕಳೆದುಹೋದವರು..!

Posted on Updated on

ಸ್ವಾತಂತ್ರ್ಯ ನೆತ್ತಿಗೇರಿ
ಬಂಧನದ ಹಂಬಲ
ರೆಪ್ಪೆ ಬಡಿಯದೆ ಕೂತು
ತೆರೆದ ಬಾಗಿಲಿಗೆ ನೆಟ್ಟನೋಟ
ಹೇಳಿಕೊಳ್ಳದ ಸಂಕಟ..
ಸೋಂಬೇರಿ ಕಸಬರಿಗೆ
ಮೈಮುರಿಯುವುದೇ ಇಲ್ಲ
ಧೂಳು-ಕಸದ ಸ್ವಾತಂತ್ರ್ಯ ನಿರಾತಂಕ
ಮುದ್ದಾಡುತ್ತಿವೆ ಅವನನಪ್ಪಿ..
ಕರುಣೆ ಉಕ್ಕಿ ಹರಿದು
ಜೇಡ ಮಿಂದು ಪಾವನವಾಯ್ತು
ಸಿಂಗರಿಸುತ್ತಿದೆ ಮದುವೆಮನೆಯಂತೆ
ಮದುವಣಗಿತ್ತಿ ಕಿಸಕ್ಕನೆ ನಕ್ಕು
ಆತನಿಗೋ ಪುಕ್ಕಟೆ ಪುಳಕ..
ಮತ್ತೆ ಮುಂಜಾವದಲಿ
ಕನ್ನಡಿಯ ಮೇಲೊಂದು
ಬಿಂದಿಯಿದ್ದ ಕನಸು
ಮಿಡುಕುವ ಬಳೆಗಳ ಸದ್ದಿಗೆ
ಬಲವಂತದ ಎಚ್ಚರ..
ಲೆಕ್ಕವಿಲ್ಲದಷ್ಟು ಕನಸು
ತುಂಬಿತುಳುಕುವ ಕಸದ ಬುಟ್ಟಿ
ನಿಟ್ಟುಸಿರು ಕುಡಿದು
ಅಮಲುಗಣ್ಣಿನ ಹುಡುಗ
ಕಳೆದೇ ಹೋಗಿದ್ದಾನೆ ಹುಡುಕುತ್ತಾ
-ಎಲ್ಲಿರುವುದೋ ಅದು; ಎಂತಿರುವುದೋ ಅದು..!
-ವಿಜಯ ಕುಮಾರ್ ಕುಂಭಾಶಿ

ದೇವರು

Posted on

ಮನುಷ್ಯ
ಶುದ್ಧಮನಸ್ಕನಾಗಿ
ಪ್ರಾರ್ಥಿಸುವ ಹೊತ್ತಿಗೆ
ದೇವರ ಆಯಸ್ಸೂ ಮುಗಿದಿರುತ್ತದೆ.